ಚೀನೀ ಭಾಷೆ

ಸಿನೋ-ಟಿಬೆಟನ್ ಅಥವಾ ಟಿಬೆಟೊ-ಬರ್ಮೀ ಅಥವಾ ಇಂಡೋ-ಸಿನಿಟಿಕ್ ಮುಂತಾಗಿ ಕರೆಯುವ ಬಹು ದೊಡ್ಡ ಭಾಷಾ ಕುಟುಂಬದಲ್ಲಿನ ಒಂದು ಸ್ವತಂತ್ರವಾದ ಭಾಷೆ. ಈ ಭಾಷಾ ಕುಟುಂಬ ಚೀನೀ ಥಾಯ್, ಟಿಬೆಟನ್, ಬರ್ಮೀ ಮುಂತಾದ ಭಾಷೆಗಳಲ್ಲದೆ ಬೋಡೋ-ನಾಗಾ-ಕಚಿನ್, ಮಿಯಾವೊ, ಕೊಲೋ ಮತ್ತು ಮಾನ-ಖ್ಮರ್ ಭಾಷೆಗಳ ಗುಂಪುಗಳನ್ನೂ ಒಳಗೊಂಡಿದೆ.

ಚೀನೀ ಸಾಂಪ್ರದಾಯಿಕ ದಾಖಲೆಗಳ ಪ್ರಕಾರ ಚೀನೀ ಬರೆವಣಿಗೆ ಕ್ರಿ.ಪೂ. ಸುಮಾರು 29ನೆಯ ಶತಮಾನದಲ್ಲಿದ್ದ ಪೂಹ್ಸಿ ಎಂಬ ರಾಜನಿಗೆ ಹಳದಿ ನದಿಯಿಂದ ಉದ್ಭವವಾದ ಪೆಡಂಭೂತದ ಬೆನ್ನಿನ ಮೇಲೆ ಗೋಚರಿಸಿದ ರಹಸ್ಯವಾದ ಸಂಕೇತಗಳ ವೀಕ್ಷಣೆಯಿಂದ ವೇದ್ಯವಾಯಿತೆಂದು ತಿಳಿದುಬರುತ್ತದೆ. ಕ್ರಿ.ಪೂ. 1500ರ ಸುಮಾರಿನವು ಎನ್ನಲಾದ ಚೀನೀ ಬರೆವಣಿಗೆಯ ತುಣುಕುಗಳು ಲಭ್ಯವಾಗಿರುವುದಂತೂ ನಿಜ. ಬರೆವಣಿಗೆಗೆ ಇಂಥ ಪರಿಷ್ಕಾರ ಬರಲು ಶತಮಾನಗಳ ವ್ಯವಸಾಯ ನಡೆದಿದೆ ಎಂಬುದನ್ನು ಇಲ್ಲಿನ ಬರೆವಣಿಗೆಯ ಮಾದರಿಗಳು ತೋರಿಸುತ್ತವೆ.

ಕಾಲಾನುಕಾಲಕ್ಕೆ ಚೀನೀ ಭಾಷೆಯಲ್ಲಿ ಅನೇಕ ವಿಧವಾದ ಬೆಳೆವಣಿಗೆಯೂ ಬದಲಾವಣೆಗಳೂ ಆಗಿವೆ. ಚೀನೀಯರಲ್ಲದ ಜನಗಳ ಸಂಪರ್ಕದಿಂದಾಗಿ ಚೀನೀ ಭಾಷೆಯ ಮೇಲೆ ಇತರ ಸಂಸ್ಕøತಿಗಳೂ ಸಾಕಷ್ಟು ಪ್ರಭಾವ ಬೀರಿವೆ. ಚೀನೀ ಭಾಷೆಯ ಇತಿಹಾಸವನ್ನು ನಾಲ್ಕುಭಾಗಗಳಾಗಿ ವಿಂಗಡಿಸಬಹುದು. ಅತಿಪ್ರಾಚೀನ ಕಾಲ ಅನಾದಿಕಾಲದಿಂದ ಕ್ರಿ.ಶ. ಸುಮಾರು 500ರ ವರೆಗಿನದು. ಕ್ರಿ.ಶ. ಸುಮಾರು 500 ರಿಂದ ಹಿಡಿದು 900 ವರೆಗಿನ ಪ್ರಾಚೀನ ಕಾಲ, ಕ್ರಿ.ಶ. 900 ರಿಂದ ಕ್ರಿ.ಶ. 1200 ರವರೆಗಿನ ಮಧ್ಯಕಾಲ, 1200 ರಿಂದ ಈಚಿನ ಆಧುನಿಕ ಕಾಲ.

ಉಚ್ಚಾರಣೆಯಲ್ಲಿ ಮತ್ತು ಬರವಣಿಗೆಯ ಶೈಲಿಯಲ್ಲಿನ ಅನೇಕ ಬದಲಾವಣೆಗಳ ಹೊರತು ಚೀನೀ ಭಾಷೆ ಯಾವ ಅನ್ಯಭಾಷೆಯಿಂದಲೂ ಬಹುಮಟ್ಟಿಗೆ ಪದ ಸ್ವಿಕಾರ ಮಾಡಿಲ್ಲ ಮತ್ತು ಸಾಹಿತ್ಯ ಮಾಧ್ಯಮವಾಗಿ ಅದರ ಮೂಲ ಗುಣಗಳು ಸ್ವಲ್ಪವೂ ಬದಲಾವಣೆಗೊಂಡಿಲ್ಲ. ಇದೇ ಕಾರಣಕ್ಕಾಗಿ ಕ್ರಿ.ಸ್ತ ಪೂರ್ವದ ಕಾನ್ ಫ್ಯೂಷಸನ ಕಾಲದ ಪ್ರಾಚೀನ ಗ್ರಂಥಗಳ ಭಾಷೆ ಇಂದಿನವರೆಗೆ ಅರ್ಥವಾಗುವಂತಿದೆ.

ಅಕ್ಷರ ಬರೆಹವುಳ್ಳ ಭಾಷೆಗಳಲ್ಲಾದರೆ ಆಡುಮಾತಿನಲ್ಲಿನ ಉಚ್ಛರಣಾ ವಿವರಗಳು, ವ್ಯತ್ಯಾಸಗಳು ಬರೆಹದಲ್ಲೂ ಕಾಣಸಿಗುತ್ತವೆ. ಆದರೆ ಚೀನಿ ಲಿಪಿ ಅಂಥ ಯಾವ ಧ್ವನಿ ವ್ಯತ್ಯಾಸಗಳನ್ನೂ ತೋರುವಂಥದಲ್ಲ. ಹೀಗಾಗಿ ಚೀನೀ ಬರೆಹದಲ್ಲಿ ಕಾಲಾನುಕಾಲಕ್ಕೆ ಕಂಡುಬಂದ ವ್ಯತ್ಯಾಸಗಳು ಕಡಿಮೆ. ಆಡುಮಾತು ಕಿವಿಗೆ ತೃಪ್ತಿ ತರುವಂತೆ ಬರೆದ ಮಾತು ಕಣ್ಣಿಗೆ ತೃಪ್ತಿತರುತ್ತದಷ್ಟೆ. ಇದೇ ಕಾರಣದಿಂದಾಗಿ ಆಡುಮಾತಿನಲ್ಲಿ ಹೆಚ್ಚಿನ ಬದಲಾವಣೆಗಳಾಗಿದ್ದರೂ ಬರೆಹದಲ್ಲಿ ಮಾತ್ರ ಚೀನೀ ಭಾಷೆ ಚೀನ ಮತ್ತು ಪೂರ್ವ ಏಷ್ಯಗಳಲ್ಲಿ ಒಂದೇ ರೀತಿಯದಾಗಿದೆ.

ಬಹುಮುಖ್ಯವಾದ ಆಧುನಿಕ ಚೀನೀ ಉಪಭಾಷೆಗಳನ್ನು ಕೆಳಗೆ ಹೇಳಿರುವ ಆರು ಗುಂಪುಗಳಾಗಿ ವಿಂಗಡಿಸಬಹುದು. ; ಮಂಡಾರಿನ್, ವು ಕನ್ -ಹಕ್ಕಾ, ಮಿನ್, ಕ್ಯಾಂಟನ್ ಮತ್ತು ಸಿಯಾಂಗ್, ಮಂಡಾರಿನ್ ಗುಂಪನ್ನು ಮತ್ತೆ ಮೂರು ಉಪಗುಂಪುಗಳಾಗಿ ವಿಂಗಡಿಸಬಹುದು ; ಔತ್ತರೇಯ, ದಾಕ್ಷಿಣಾತ್ಯ ಮತ್ತು ನೈಋತ್ಯ, ಔತ್ತರೇಯ (ಉಪಗುಂಪಿನ ಭಾಷೆಯನ್ನು ಮಂಚೂರಿಯ, ಉತ್ತರ ಚೀನ, ಷಿನ್‍ಜಿಯಾಂಗ್, ಕ್ಯಾನ್ಸೂ ಮತ್ತು ಹೂಪೇ, ಅನ್‍ಹ್ವೇ) ಮತ್ತು ಜಿಯಾಂಗ್‍ಸೂ ಪ್ರಾಂತ್ಯಗಳ ಭಾಗಗಳಲ್ಲಿ ಮಾತನಾಡುತ್ತಾರೆ. ಪೀಪಿಂಗ್ ಉಪಭಾಷೆ ಈ ಉಪಗುಂಪಿನಲ್ಲಿ ಪ್ರಸಿದ್ಧಿಯಾದ ಭಾಷೆ, ದಾಕ್ಷಿಣಾತ್ಯ ಉಪಗುಂಪಿನ ಭಾಷೆಯನ್ನು ಆನ್‍ಹ್ವೇ, ಕಿಂಗ್‍ಸು ಮತ್ತು ಹೂಪೇ ಮೊದಲಾಗಿ ಯಂಗ್‍ಟ್ಸೀ ನದಿಯ ಕೆಳಭಾಗದ ಪ್ರಾಂತ್ಯದಲ್ಲಿ ಮಾತನಾಡುತ್ತಾರೆ. ನೈಋತ್ಯ ಉಪಗುಂಪಿನ ಭಾಷೆಯನ್ನು ಸೆಚುಯಾಂಗ್, ಯುನ್ಯಾನ್, ಗ್ವೇಜೋ ಮತ್ತು ಹೂಪೇ ಹಾಗೂ ಗ್ವಾಂಗ್‍ಸೀ ಪ್ರಾಂತ್ಯಗಳ ಭಾಗಗಳಲ್ಲಿ ಮಾತನಾಡುತ್ತಾರೆ. ಷಾಂಗ್‍ಹೈ ವೆಂಜೋ ಮತ್ತು ಷೂಜೋ ಉಪ ಭಾಷೆಗಳನ್ನೊಳಗೊಂಡವು ಗುಂಪಿನ ಭಾಷೆಯನ್ನು ಜಿಯಾಂಗ್‍ಸೂ, ಜಜಿಯಾಂಗ್ ಮತ್ತು ಪೂರ್ವ ಜಿಯಾಂಗ್‍ಸೀ ಪ್ರಾಂತ್ಯಗಳಲ್ಲಿ ಮಾಡನಾಡುತ್ತಾರೆ. ಪೂಚೌ, ಆಮಾಯ್ ಮತ್ತು ಸ್ವಾಟು ಉಪ ಭಾಷೆಗಳನ್ನೊಳಗೊಂಡ ಮಿನ್ ಗುಂಪಿನ ಭಾಷೆಯನ್ನು ಉತ್ತರ ಪೂಕ್ಯೆನ್ ಮತ್ತು ಪೂರ್ವ ಗ್ವಾಂಗ್‍ಡುಂಗ್ ಪ್ರಾಂತ್ಯಗಳಲ್ಲೂ ಹೈನಾನ್ ದ್ವೀಪ ಹಾಗೂ ಲೀಚೋ, ಪರ್ಯಾ ದ್ವೀಪಗಳಲ್ಲೂ ಮಾತನಾಡುತ್ತಾರೆ. ಕ್ಯಾಂಟನ್ ಗುಂಪಿನ ಭಾಷೆಯನ್ನು ಮುಖ್ಯವಾಗಿ ಗ್ವಾಂಗ್ ಡುಂಗ್ ಮತ್ತು ಗ್ವಾಂಗ್ ಸೀ ಪ್ರಾಂತ್ಯಗಳಲ್ಲಿ ಮಾತನಾಡುತ್ತಾರೆ. ಷೀಯಾನ್ ಗುಂಪಿನ ಭಾಷೆಯನ್ನು ಮುಖ್ಯವಾಗಿ ಹೂನಾನ್ ಪ್ರಾಂತ್ಯದಲ್ಲಿ ಮಾತನಾಡುತ್ತಾರೆ. ಈ ಮುಖ್ಯವಾದ ಗುಂಪುಗಳಲ್ಲದೆ ದಕ್ಷಿಣ ಆನ್‍ಹ್ವೇ, ಹೂನಾನ್ ಮತ್ತು ವಾಯುವ್ಯ ಗ್ವಾಂಗ್‍ಸೀ ಪ್ರಾಂತ್ಯಗಳಲ್ಲಿ ಮಾತನಾಡುವ ಕೆಲವು ಪ್ರತ್ಯೇಕವಾದ ಉಪಭಾಷೆಗಳಿವೆ.
ಪ್ರಾಚೀನ ಚೀನೀ ಭಾಷೆಯ-ಮ್,-ಪ್,-ತ್,-ಕ್ ವ್ಯಂಜನಗಳನ್ನು ಉಳಿಸಿಕೊಂಡಿರುವ ಅಥವಾ ಕೈಬಿಟ್ಟಿರುವ ಸಂದರ್ಭದ ಮೇಲೂ ಸಾಮಾನ್ಯ ಅಘೋಷಿತವಾದ ಬ್ ದ್ ಗ್ ದ್ ಮುಂತಾದ ಆದಿ ಘೋಷಗಳನ್ನು ಉಳಿಸಿಕೊಂಡಿರುವುದರ ಮೇಲೂ ಈ ಉಪಭಾಷೆಗಳನ್ನು ಸ್ಥೂಲವಾಗಿ ವಿಂಗಡಿಸಲಾಗಿದೆ.

	ಚೀನೀ ಬರೆವಣಿಗೆಯ ವಿಧಾನ ಇತಿಹಾಸ ಪ್ರಾರಂಭ ಕಾಲದಲ್ಲಿ ಚಿತ್ರಗಳಿಂದ ಕೂಡಿದ ಬರೆವಣಿಗೆಯಲ್ಲಿ ಬಳಕೆಯಲ್ಲಿದ್ದಂಥ ಬಹುತೇಕ ಸಂಜ್ಞೆಗಳನ್ನೂ ಅಕ್ಷರಗಳನ್ನೂ ಹೊಂದಿದೆ. ಅಮೂರ್ತ ಹಾಗೂ ಮೂರ್ತ ಅರ್ಥವನ್ನೂ ಕೊಡಬಹುದಾದ ಸಂಜ್ಞೆಗಳ ಆವಶ್ಯಕತೆ ಹೆಚ್ಚಿದಂತೆ ಮತ್ತು ಅನೇಕ ಅಭಿಪ್ರಾಯಗಳನ್ನು ಚಿತ್ರಗಳ ಮೂಲಕ ಹೇಳುವುದು ಅಸಾಧ್ಯವೆಂದು ಕಂಡುಬಂದಾಗ ಭಾವಲಿಪಿ (ಐಡಿಯೋಗ್ರ್ಯಾಫಿಕ್) ಮತ್ತು ಸೂಚಕ (ಸಜೆಸ್ಟಿವ್) ಅಕ್ಷರಗಳನ್ನು ಕಂಡು ಹಿಡಿಯಲಾಯಿತು. ಹೀಗೆ ಬರೆವಣಿಗೆಯ ಏಳು ವಿಧಾನಗಳು ಅಭಿವೃದ್ಧಿಗೊಂಡವು. ಅವುಗಳಲ್ಲಿ ಬಹಳ ಹಳೆಯದಾದುದು ಸಾಂಪ್ರದಾಯಿಕವಾಗಿ ಕ್ರಿಪೂ. 1760-1122ರ ಕಾಲದ ಚಿಯಾಕುವೆನ್ ಬರೆವಣಿಗೆ (ಆರಕಲ್ ಬೋನ್ ರಯಟಿಂಗ್) ಇದರ ಅನಂತರ ಕ್ರಿ.ಪೂ. 1122-221 ರ ಕಾಲದ ತಚುವಾನ್ ಅಥವಾ ಮಹಾಮುದ್ರೆ ವಿಧಾನ. ಸಿಯಾವೋ ಚುವಾನ್ ಅಥವಾ ಕನಿಷ್ಟ ಮುದ್ರೆ ವಿಧಾನ ಅನಂತರದಲ್ಲಿದ್ದು ಉಷೂ ಅಥವಾ ಸರ್ಕಾರಿ, ಕೈಷೂ ಅಥವಾ ಮದರು ವಿಧಾನ. ಸಿಂಗ್ ಷೂ ಅಥವಾ ಶೀಘ್ರಗಾಮಿ ಮತ್ತು ಕೊನೆಯದಾಗಿ ಸಾವೋ ಷೂ ಅಥವಾ ಕುರ್ಸೀನ್ ವಿಧಾನಗಳು ಆಮೇಲೆ ಬಂದವು. ಚೀನೀಭಾಷೆ ಇತರ ಭಾಷೆಗಳಲ್ಲಿರುವಂತೆ ವರ್ಣಮಾಲೆಯನ್ನು ಹೊಂದಿಲ್ಲ. ಪ್ರತಿ ಅಕ್ಷರವೂ ಒಂದು ಪದವನ್ನು ಪ್ರತಿನಿಧಿಸುವುದರಿಂದ ಎಷ್ಟು ಪದಗಳಿದ್ದರೆ ಅಷ್ಟು ಅಕ್ಷರಗಳಿವೆ. 
ಕೆಳಗೆ ಹೇಳಿರುವಂತೆ ನಾನಾವಿಧವಾದ ಕೊಟ್ಟುಗಳ ಆಧಾರದ ಮೇಲೆ ಅಕ್ಷರಗಳ ಸ್ವರೂಪವನ್ನು ಗುರುತಿಸಬಹುದು.
	ಉದ್ದವಾದ ಗೆರೆ	|
	ಅಡ್ಡವಾದ ಗೆರೆ	—
ಎಡ ಕೊಕ್ಕೆ	)
	ಬಲ ಕೊಕ್ಕೆ	(
ಈ ಅಕ್ಷರಗಳನ್ನು ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಅಥವಾ ಮೇಲಿಂದ ಕೆಳಕ್ಕೆ ಬರೆಹಗಾರನ ಶೈಲಿಯನ್ನು ಅನುಸರಿಸಿ ಬರೆಯಬಹುದು. 							(ಐ.ಎಸ್.ಐ.)

ಚೀನೀ ಲಿಪಿ : ಮೊದಲಿನ ಚಿತ್ರಲಿಪಿ ವಿಧಾನವನ್ನು ಪ್ರಾಚೀನ ಚೀನೀರು ಕೈಬಿಡಲಿಲ್ಲ. ಇದಕ್ಕೆ ಕಾರಣಗಳೇನೆಂಬುದು ನಮಗೆ ತಿಳಿಯದು. ಬದಲಾಗಿ ಈ ಹಾದಿಯಲ್ಲಿ ಅವರು ಮತ್ತಷ್ಟು ಮುಂದುವರಿದರು. ಉದಾಹರಣೆ, ಮಹತ್ತರವಾದುದು ಅಥವಾ ಹಿರಿದಾದುದು ಎಂಬುದನ್ನು ಸೂಚಿಸಲು ಅವರು ದೊಡ್ಡ ಮನುಷ್ಯನೊಬ್ಬನ ಚಿತ್ರವನ್ನು (ಚಿತ್ರ 1) ಬರೆದರು ; ಈ ದೊಡ್ಡ ಮನುಷ್ಯನ ಚಿತ್ರದ ತಲೆಮೇಲೆ ಅಡ್ಡಲಾಗಿ ಒಂದು ಗೆರೆಯನ್ನು ಎಳೆಯುವುದರ ಮೂಲಕ (ಚಿತ್ರ 2) ಸ್ವರ್ಗ ಎಂಬುದನ್ನು ಸೂಚಿಸುವ ಮತ್ತೊಂದು ಶಬ್ದವನ್ನು ರೂಪಿಸಿಕೊಂಡರು. ಮಾನವ ಎಷ್ಟೇ ಶಕ್ತಿಶಾಲಿಯಾದರೂ ಸ್ವರ್ಗದ ನಿಯಂತ್ರಣಕ್ಕೆ ಒಳಪಟ್ಟಿದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ. ಚೀನೀ ಭಾಷೆಯಲ್ಲಿ ಸ್ವರ್ಗ ಎಂಬುದು ದೇವರಿಗೆ ಪರ್ಯಾಯವಾಗಿರುವ ಶಬ್ದ. ಮೇಲಿನ ಈ ಗೆರೆಯನ್ನು ತಳಭಾಗಕ್ಕೆ ವರ್ಗಾಯಿಸುವುದರ ಮೂಲಕ (ಚಿತ್ರ 3) ನೆಲೆ ಎಂಬುದನ್ನು ಸೂಚಿಸುವ ಶಬ್ದ ರೂಪಿತವಾಯಿತು. ಏಕೆಂದರೆ ಅಡ್ಡಲಾಗಿ ಎಳೆದ ಗೆರೆ ನೆಲವನ್ನು ಸೂಚಿಸುತ್ತದೆ. ಮುಂದೆ ಇಬ್ಬರು ದೊಡ್ಡ ಮನುಷ್ಯರು ನೆಲದಮೇಲೆ ನಿಂತಿರುವಂಥ ಚಿತ್ರವನ್ನು (ಚಿತ್ರ 4) ರಚಿಸಿದರು. ಇದು ಜೊತೆಯನ್ನು ಸೂಚಿಸುವ ಶಬ್ದವಾಯಿತು. ಈ ಶಬ್ದದ ಕೆಳಗೆ ಸೂರ್ಯನನ್ನು ಚಿತ್ರಿಸುವುದರ ಮೂಲಕ (ಚಿತ್ರ 5) ಜನಪ್ರಿಯ ಶಬ್ದ ರೂಪುಗೊಂಡಿತು. (ಸೂರ್ಯ ಯಾರೋ ಒಬ್ಬರಿಗಲ್ಲದೆ ಎಲ್ಲರಿಗೂ ಆನಂದವನ್ನುಂಟುಮಾಡುತ್ತಾನೆ. ಎಂಬುದೇ ಈ ವ್ಯುತ್ಪತ್ತಿಯ ಹಿನ್ನೆಲೆಯಲ್ಲಿರುವ ತರ್ಕ) ಮೇಲ್ಕಂಡ ರೀತಿಯಲ್ಲಿ ಸೃಷ್ಟಿಸಲಾದ ಶಬ್ದಗಳು ಚಿತ್ರ ಮಾತ್ರವಾಗಿ ಉಳಿಯಲಿಲ್ಲ ; ಅವು ಭಾವಲಿಪಿ-ಸಂಬಂಧಿಗಳು ಆಗಿ ಪರಿಣಮಿಸಿದುವು. ಇವುಗಳ ಹಿಂದೆ ಭಾವಗಳು ಅಡಕಗೊಂಡಿದ್ದುದೇ ಇದಕ್ಕೆ ಕಾರಣ. ಲಿಖಿತ ಸಂಕೇತಗಳನ್ನು ಧ್ವನಿ ಸಂಕೇತಗಳನ್ನಾಗಿ ಪರಿವರ್ತಿಸುವುದಕ್ಕೆ ಮುಂಚೆ ಪ್ರಾಚೀನ ಗ್ರೀಕರಾಗಲೀ ಈಜಿಪ್ಷಿಯನ್ನರಾಗಲೀ ಭಾವಲಿಪಿ ವಿಧಾನದ ಬಗ್ಗೆ ಯೋಚಿಸಿರಲಿಲ್ಲ. ಇಷ್ಟಾಗಿಯೂ ಧ್ವನಿಸಂಕೇತಗಳ ಉಪಯುಕ್ತತೆಯನ್ನು ಚೀನೀಯರು ನಿರ್ಲಕ್ಷಿಸಿರಲಿಲ್ಲ. ವರ್ಣ ಮಾಲೆಯನ್ನು ಬಳಸುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ಅವರು ಧ್ವನ್ಯಂಶಗಳನ್ನು ಬಳಸಿಕೊಂಡರು. ಮೇಲೆ ಹೇಳಿದಂತೆ ಚಿಹ್ನೆಗಳನ್ನೂ, ಸಂಕೇತಗಳನ್ನೂ ಹೆಚ್ಚಿಸುವುದರ ಮೂಲಕ ಹೊಸಶಬ್ದಗಳನ್ನು ಅವು ರೂಪಿಸುತ್ತ ನಡೆದರು. ಆದರೆ ಕೆಲವು ಸಂಕೇತಗಳು ಧ್ವನಿಸಂಕೇತಗಳಾಗಿ ಬಳಕೆಗೆ ಬರತೊಡಗಿದುವು. ಮೇಲೆ ಹೇಳಿದ ಶಬ್ದವನ್ನು ಪಿಂಗ್ ಎಂದು ಉಚ್ಚರಿಸುತ್ತಾರೆ. ಕಲ್ಲು ಎಂಬುದನ್ನು ಸೂಚಿಸುವ ಮತ್ತೊಂದು ಸಂಕೇತವನ್ನು (ಚಿತ್ರ 6) ರಲ್ಲಿ ಕಾಣಿಸಿದೆ. ಇದರೊಡನೆ ಸೇರಿದಾಗ ರೂಪಿತವಾಗುವ ಹೊಸಶಬ್ದ (ಚಿತ್ರ 7) ಆಧುನಿಕ ಬರೆಹದಲ್ಲಿ (ಚಿತ್ರ 8) ಘರ್ಷಣೆ (ಜೊತೆಯಾಗಿರುವ ಎರಡು ಕಲ್ಲುಗಳು) ಎಂಬುದನ್ನು ಸೂಚಿಸುತ್ತದೆ. ಇದನ್ನು ಪ್ ಎಂಗ್ ಎಂದು ಉಚ್ಚರಿಸುತ್ತಾರೆ. ಇದೇ ರೀತಿ ಮೇಲೆ ಕಾಣಿಸಿದ ಜನಪ್ರಿಯ ಎಂಬ ಅರ್ಥವನ್ನು ಸೂಚಿಸುವ ಶಬ್ದವನ್ನು ಪ್ ಉ ಎಂದು ಉಚ್ಚರಿಸುತ್ತಾರೆ. ಮಾತು ಎಂಬುದನ್ನು ಸೂಚಿಸುವ ಚಿಹ್ನೆಯೊಂದನ್ನು ಇದರ ಎಡಪಾಶ್ರ್ವಕ್ಕೆ ಸೇರಿಸಿದ ಬಳಿಕವೂ ಇದನ್ನು ಪ್‍ಉ ಎಂದೇ ಉಚ್ಚರಿಸುತ್ತಾರಾದರೂ ಪದ್ಯವೊಂದನ್ನು ಸಂಗೀತಕ್ಕೆ ಅಥವಾ ಲಯಕ್ಕೆ ಒಳಪಡಿಸುವುದು ಎಂಬುದಾಗಿ ಅರ್ಥಬದಲಾಗುತ್ತದೆ. ಮಾತು ಎಂಬುದನ್ನು ಸೂಚಿಸುವ ಅಂಶ ಅದರೊಡನೆ ಸೇರಿಕೊಂಡಿರುವುದೇ ಇದಕ್ಕೆ ಕಾರಣ. (ಮಾತು ಎಂಬುದು ಎಲ್ಲ ಪರಿಷ್ಕøತ ನುಡಿಗಳನ್ನೂ- ಉದಾ ; ಸಾಹಿತ್ಯವನ್ನೂ-ಒಳಗೊಳ್ಳುತ್ತದೆ).

ಹೀಗೆ ವರ್ಣಮಾಲೆ ಇಲ್ಲದೆ, ಚೀನಿಯರು ತಮ್ಮವೇ ಆದ ಶಬ್ದದ ಸಂಪತ್ತನ್ನು ಹೊಂದಿದ್ದರು. ಇವುಗಳಲ್ಲಿ ಪ್ರತಿಯೊಂದು ಶಬ್ದವೂ ಯಾವುದೋ ಒಂದು ಭಾವನೆಯನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಒಂದು ನಿರ್ದಿಷ್ಟ ಧ್ವನಿಯನ್ನು ಗೊತ್ತುಪಡಿಸಲಾಗುತ್ತದೆ. ಈ ಧ್ವನಿ ಅಥವಾ ಉಚ್ಚಾರ ಒಂದಕ್ಕಿಂತಲೂ ಹೆಚ್ಚು ಶಬ್ದಗಳಿಗೆ ಸಾಮಾನ್ಯವಾಗಿರಬಹುದು. ಆದರೆ, ಗೊಂದಲವನ್ನು ದೂರುಮಾಡುವ ದೃಷ್ಟಿಯಿಂದ ಚೀನೀಯರು ಸಾಮಾನ್ಯವಾಗಿ ಸಮಾಸಶಬ್ದಗಳನ್ನು ಬಳಸುತ್ತಾರೆ. ಉದಾಹರಣೆಗೆ ಪ್‍ಉ ಎಂಬ ಚೀನೀ ಶಬ್ದ ಜನಪ್ರಿಯ ಅಥವಾ ರಾಗ ಅಥವಾ ಸ್ವರೂಪ, ಮತ್ತು ಪರಸ್ಪರ ಭಿನ್ನವಾದ ಅರ್ಥಗಳನ್ನು ಹೊಂದಿರುವ ಅನೇಕ ಶಬ್ದಗಳನ್ನು ಸೂಚಿಸಬಹುದು. ಹೀಗಾಗಿ ಚೀನಿಯರು ಎರಡೆರಡು ಶಬ್ದಗಳನ್ನು ಬಳಸುತ್ತಾರೆ. ಪ್‍ಉ-ತ್-ಉಂಗ್ ಎಂಬುದನ್ನು ಜನಪ್ರಿಯ ಎಂಬುದಕ್ಕೂ ಕೆಪ್‍ಉ ಎಂಬುದನ್ನು ರಾಗಕ್ಕೂ ಬಳಸುತ್ತಾರೆ. ಒಂದು ರೀತಿಯಲ್ಲಿ ಈ ತಂತ್ರಕ್ಕಾಗಿ ಚೀನೀಯರು ಭಾರತಕ್ಕೆ ಋಣಿಯಾಗಿದ್ದಾರೆ. ಪ್ರಾಚೀನ ಸಂಸ್ಕøತ, ಧರ್ಮ-ಚಕ್ರ, ಮಹಾಯಾನದಂಥ ಸಮಾನಶಬ್ದಗಳಿಂದ ತುಂಬಿತ್ತು. ಬೌದ್ಧಧರ್ಮಗ್ರಂಥಗಳ ಜೊತೆಯಲ್ಲಿ ಇವುಗಳೂ ಚೀನೀಯರಿಗೆ ಪರಿಚಿತವಾದುವು. ಎರವಲು-ಶಬ್ದಗಳಿಗೆ ಶರಣಾದ ವಿದೇಶೀ ಪಾರಿಭಾಷಿಕಶಬ್ದಗಳನ್ನು ಹೇಗೆ ಅಳವಡಿಸಿಕೊಳ್ಳಬಹುದೆಂಬುದನ್ನು ಅವರು ಚೀನೀಯರಿಗೆ ಕಲಿಸಿಕೊಟ್ಟರು. ಕೆಳಗೆ ಕೆಲವು ಆಧುನಿಕ ಉದಾಹರಣೆಗಳನ್ನು ಕೊಟ್ಟಿದೆ.

ತಿಎನ್-ಹುಅ (ವಿದ್ಯುತ್-ಮಾತು)-ದೂರವಾಣಿ (ಟೆಲಿಫೋನ್)
ಮಿನ್-ಛು (ಜನತೆ-ಪ್ರಭು)-ಗಣತಂತ್ರ
ಯಂಗ್ ಛ್‍ಇ (ಪೋಷಕ-ಅನಿಲ)-ಆಕ್ಸಿಜನ್
ಧ್ವನ್ಯಾತ್ಮಕ ಭಾಷೆಯಲ್ಲಿ ವರ್ಣ (ಅಥವಾ ಅಕ್ಷರ), ಶಬ್ದ ಮತ್ತು ವಾಕ್ಯಗಳು ಮೂಲಘಟಕಗಳಾಗಿದ್ದರೆ. ಚೀನೀ ಭಾಷೆಯಲ್ಲಿ ಶಬ್ದ (ಇವನ್ನು ನಾವು ಚಿಹ್ನೆಯೆಂದು ಕರೆಯುತ್ತೇವೆ). ಸಮಾಸಶಬ್ದ ಮತ್ತು ವಾಕ್ಯಗಳಲ್ಲಿ ಮೂಲ ಘಟಕಗಳಾಗಿವೆ. ಇಷ್ಟಾಗಿಯೂ ಮುದ್ರಣ ಹಾಗೂ ಬರೆಹದಲ್ಲಿ ಚೀನೀವಾಕ್ಯ ಕೇವಲ ಚಿಹ್ನೆಗಳನ್ನು ಮಾತ್ರ ತೋರಿಸುತ್ತದೆ. ಇವನ್ನು ಮೇಲಿನಿಂದ ಕೆಳಕ್ಕೆ, ಈಗಿನ ದಿನಗಳಲ್ಲಿ ಕೆಲವೊಮ್ಮೆ ಎಡದಿಂದ ಬಲಕ್ಕೆ, ಅವುಗಳ ನಡುವೆ ಸಮಾನ ಅಂತರವನ್ನು ಬಿಟ್ಟು ಜೋಡಿಸುತ್ತಾರೆ. ಸಮಾಸ ಶಬ್ದವನ್ನು ಸೂಚಿಸುವುದಕ್ಕಾಗಿ ಚೀನೀ ಬರೆಹದಲ್ಲಾಗಲೀ, ಮುದ್ರಣದಲ್ಲಾಗಲೀ ಕೂಡುಗೆರೆ (ಹೈಫೆನ್) ಯನ್ನು ಬಳಸುವುದಿಲ್ಲ. ತಜ್ಞ ಕಣ್ಣುಗಳು ಮಾತ್ರವೇ ಶಬ್ದಗಳ ನಡುವಣ ಅದೃಶ್ಯಕೊಂಡಿಗಳನ್ನು ಗುರುತಿಸಬಲ್ಲವು.
ಉಚ್ಚಾರಣೆಯ ದೃಷ್ಟಿಯಿಂದ ಪ್ರತಿಯೊಂದು ಚಿಹ್ನೆಯೂ ಪ್ರತ್ಯೇಕ ಘಟಕವಾಗಿರುತ್ತದೆ. ಹೀಗಾಗಿ, ಈ ಭಾಷೆ ಏಕಾಕ್ಷರ ವ್ಯವಸ್ಥೆಯುಳ್ಳದ್ದೆಂಬಂತೆ ತೋರುತ್ತದೆ. ನಲವತ್ತು ಸಾವಿರಕ್ಕೂ ಹೆಚ್ಚು ಚಿಹ್ನೆಗಳಿವೆ. ಇವುಗಳಲ್ಲಿ ಏಳರಿಂದ ಹತ್ತು ಸಾವಿರ ಚಿಹ್ನೆಗಳು ಇಂದು ಬಳಕೆಯಲ್ಲಿವೆ. ಆದರೆ ಪೀಕಿಂಗಿನ ಉಪಭಾಷೆಯಲ್ಲೆ (ಈ ಉಚ್ಚಾರಣೆಯೇ ಶಿಷ್ಟ ಉಚ್ಚಾರಣೆಯೆಂದು ಪರಿಗಣಿತವಾಗಿದೆ) ಕೇವಲ ನಾಲ್ಕುನೂರು ಧ್ವನಿಗಳಿವೆ. ಅಂತೆಯೇ ಚೀನೀ ಚಿಹ್ನೆಗಳಲ್ಲಿ ಸಮಸ್ವನಗಳು ಸಾಮಾನ್ಯವಾಗಿ ಕಾಣದೊರೆಯುತ್ತವೆ. ಹೀಗಾಗಿ ಚೀನೀ ಭಾಷೆಯ ಶ್ರುತ್ಯಾತ್ಮಕ ಉಚ್ಚಾರಣೆಯೊಂದೇ ಇದಕ್ಕಿರುವ ಏಕೈಕ ಪರಿಹಾರ. ಬೀಜಿಂಗಿನ ಉಪಭಾಷೆಯಲ್ಲಿ ಪ್ರತಿಯೊಂದು ಧ್ವನಿಯನ್ನು ನಾಲ್ಕು ಭಿನ್ನ ಶುೃತಿಗಳಲ್ಲಿ ಉಚ್ಚರಿಸಲಾಗುತ್ತದೆ ; ಇತರ ಉಪಭಾಷೆಗಳಲ್ಲಿ ಇನ್ನೂ ಹೆಚ್ಚು ಶುೃತಿಗಳಲ್ಲಿ ಕಾಣಬರುತ್ತವೆ. ಚೀನದಲ್ಲಿ ಮೊರಡಿಗಳು, ತೊರೆಗಳು ಹೇಗೆ ಅಸಂಖ್ಯಾತವಾಗಿಯೋ ಹಾಗೆಯೇ ಉಪಭಾಷೆಗಳೂ ಅಸಂಖ್ಯವಾಗಿವೆ.

ಇತರ ಭಾಷೆಗಳಲ್ಲಿರುವಂತೆ ಲಿಂಗ, ಕಾಲ, ವಚನ, ವಿಭಕ್ತಿ ಕರ್ತರೀ-ಕರ್ಮಣಿ ಪ್ರಯೋಗಗಳು ಇವೇ ಮೊದಲಾದವಕ್ಕೆ ಸಂಬಂಧಿಸಿದಂತೆ ಚೀನೀಭಾಷೆಯಲ್ಲಿ ನಿರ್ದಿಷ್ಟ ನಿಯಮಗಳಿಲ್ಲ. ಇಷ್ಟಾಗಿಯೂ ಚೀನೀ ಭಾಷೆ ಅವ್ಯವಸ್ಥಿತವಾದ ಬರೆಹಕ್ಕೆ ಎಡಗೊಟ್ಟಿಲ್ಲ. ಶುದ್ಧ ಚೀನೀ ಭಾಷೆಯಲ್ಲಿ ಬರೆಯಬೇಕಾದರೆ ಕೆಲವೊಂದು ವಾಕ್ಯರಚನಾಕ್ರಮಗನ್ನು ಅನುಸರಿಸಬೇಕಾಗುತ್ತದೆ. ಸಂದರ್ಭಾನುಗುಣವಾಗಿ ಶಬ್ದವರ್ಗಗಳನ್ನು-ನಾಮಪದ ಕ್ರಿಯಾಪದ ಇತ್ಯಾದಿ-ನಿರ್ಧರಿಸಲಾಗುತ್ತದೆ. ಒಂದೇ ಶಬ್ದ ಒಂದೆಡೆ ಕ್ರಿಯಾಪದವಾಗಿ, ಇನ್ನೊಂದೆಡೆ ನಾಮಪದವಾಗಿ, ಮತ್ತೊಂದೆಡೆ ಗುಣವಾಚಕವಾಗಿ ಕಾಣಿಸಿಕೊಳ್ಳಬಹುದು. ಚೀನೀ ಭಾಷೆಯ ತತ್ತ್ವಾಧಾರ ಅಥವಾ ಯುಕ್ತಿಸಾಂಗತ್ಯ ಅಡಗಿರುವುದು ಅದರ ತಾರ್ಕಿಕ ವಿಶ್ಲೇಷಣೆಯಲ್ಲೇ ಹೊರತು ವ್ಯಾಕರಣ ನಿಯಮಗಳಲ್ಲಲ್ಲ.	ಮಾನವ ಇತಿಹಾಸದ ಏಳುಬೀಳುಗಳನ್ನು ಮೀರಿ ನಿಂತಿರುವುದರ ಮೂಲಕ ಸಾವಿರಾರು ವರ್ಷಗಳ ಕಾಲ ಚೀನೀಭಾಷೆ ತನ್ನ ಸತ್ತ್ವವನ್ನು ತೋರಿಸಿದೆ. ನಾಡು ವಿಚ್ಛಿನ್ನವಾಗಿ ಹೋಗದಂತಾಗುವಲ್ಲಿ ಈ ಭಾವಲಿಪಿಭಾಷೆ ನೆರವಾಗಿದೆ ; ಈ ಭಾಷೆ ನಶಿಸಿಹೋದಂತಾಗುವಲ್ಲಿ ಪರಮಾಧಿಕಾರ ವ್ಯವಸ್ಥೆಯನ್ನುಳ್ಳ ಈ ನಾಡು ನೆರವಾಗಿದೆ. ಚೀನೀಭಾಷೆ ಮತ್ತು ಚೀನದ ಮಹತ್ತ್ವಪೂರ್ಣ ಪ್ರತೈಕತೆ-ಇವು ಒಂದು ಮತ್ತೊಂದರ ದೀರ್ಘಕಾಲದ ಬಾಳುವೆಗೆ ಕಾರಣವಾಗಿವೆ. ಚೀನದ ಬೌದ್ಧಿಕ ಪ್ರಗತಿ ಎಲ್ಲಿಯವರೆಗೆ ವಿಶ್ವದ ಇತರ ರಾಷ್ಟ್ರಗಳ ಪ್ರಗತಿಗಿಂತ ತುಂಬ ಮುಂದಾಗಿತ್ತೋ ಅಥವಾ ಎಲ್ಲಿಯವರೆಗೆ ಅದು ಹೆಗಲೆಣೆಯಾಗಿ ಸಾಗುತ್ತಿತ್ತೋ ಅಲ್ಲಿಯವರೆಗೆ ಭಾಷಾ ಸುಧಾರಣೆಗೆ ಸಂಬಂಧಪಟ್ಟಂತೆ ಉಗ್ರ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಚೀನದ ಬುದ್ಧಿಜೀವಿಗಳಿಗೆ ತೋರಲಿಲ್ಲ. ಚೀನದ ಬುದ್ಧಿ ಜೀವಿಗಳ ಹಾಗೂ ಚೀನೀಭಾಷೆಯ ಹೊನ್ನಿನ ದಿನಗಳೂ ಈಚಿನ ಶತಮಾನಗಳಲ್ಲಿ ಹಿಂದಿನ ಕಥೆಗಳಾಗಿ ಪರಿಣಮಿಸಿದುವು. ಈ ಭಾಷೆ ಹೊಂದಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆಯಾದರೂ ಚೀನದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನಗಳ ತೀವ್ರ ಪ್ರಗತಿಗೆ ಇದು ಅಡ್ಡಗಲ್ಲಾಗಿ ಪರಿಣಮಿಸಿದೆಯೆಂಬ ಭಾವನೆ ದಿನೇ ದಿನೇ ಹೆಚ್ಚುತ್ತಿದೆ. ಜ್ಞಾನಸಾಧನೆಯ ಉಪಕರವೊಂದರ ಮೇಲೆ ಪ್ರಭುತ್ವವನ್ನು ಸಾಧಿಸಿಕೊಳ್ಳುವುದಕ್ಕಾಗಿ ಚೀನದ ವಿಜ್ಞಾನ ವಿದ್ಯಾರ್ಥಿಗಳು ತುಂಬ ಕಾಲವನ್ನು ವ್ಯಯ ಮಾಡಬೇಕಾಗಿ ಬಂದಿದೆ. ಚೀನೀ ಭಾಷೆಯನ್ನು ಕಲಿಯುವುದು ಅಷ್ಟೇ ಕಷ್ಟವಾಗಿ ಪರಿಣಮಿಸಿದೆ. ಹೀಗಾಗಿ, ಚೀನೀ ವೈಜ್ಞಾನಿಕ ಸಂಶೋಧನ ಕ್ಷೇತ್ರದಲ್ಲಿನ ಇತರ ದೇಶಗಳ ಅತ್ಯಾಧುನಿಕ ಸಾಧನೆಗಳಿಂದ ತತ್‍ಕ್ಷಣವೇ ಲಾಭ ಪಡೆಯಲಾರದಂಥ ಸ್ಥಿತಿಯಲ್ಲಿದೆ. ಭಾವಲಿಪಿ ಸಂಬಂಧಿಯಾಗಿರುವ ಚಿಹ್ನೆಗಳನ್ನು ತಂತಿಯ ಮೂಲಕ ಕಳುಹಿಸಲು ಸಾಧ್ಯವಿಲ್ಲ. ಕಾಲ ಮತ್ತು ಶ್ರಮಗಳ ಉಳಿತಾಯವಾಗುವಂತೆ ಅಚ್ಚುಕಟ್ಟಾಗಿರುವ ಬೆರಳಚ್ಚು ಯಂತ್ರವನ್ನು ರೂಪಿಸಲು ಸಾಧ್ಯವಿಲ್ಲ. (ಚೀನದಲ್ಲೇನೋ ತಂತಿ ಕಚೇರಿಗಳೂ ಚೀನೀ ಬೆರಳಚ್ಚು ಯಂತ್ರಗಳೂ ಕೆಲಸ ಮಾಡುತ್ತಿವೆ). ಈಚಿನ ವರ್ಷಗಳಲ್ಲಿ ಚೀನೀಭಾಷೆಯನ್ನು ಲ್ಯಾಟಿನೀಕರಿಸುವ ತೀವ್ರ ಪ್ರಯತ್ನಗಳೂ ನಡೆದಿವೆ.				(ಟಿ.ಸಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ